Sunday, November 9, 2008

ತಂಪಾಗಿ ಸದ್ದಿಲ್ಲದೆ ಬೀಸುತ್ತಿದ್ದ ತಂಗಾಳಿಗೆ ಮೈಯ್ಯೊಡ್ಡಿ ಕುಳಿತದ್ದೇ, ಪ್ರಕ್ಷುಬ್ಧ ಮನಸ್ಸಿನಲ್ಲಿ ಏನೇನೊ ವಿಲಕ್ಷಣ ಆಲೋಚನೆಗಳು ಸುಳಿಯತೊಡಗಿದವು. ನಿನ್ನೆಯಷ್ಟೇ ಸವಿ ಸವಿ ನೆನೆಪುಗಳನ್ನು ಮೆಲುಕು ಹಾಕಿ ತನ್ನಷ್ಟಕ್ಕೆ ತಾನೇ ನಗುತ್ತಿದ್ದ ಮನಸ್ಸು. ಇವತ್ತು ಅದೇನಾಯ್ತೊ ದುಃಖ ಉಮ್ಮಳಿಸಿ ಬರುತ್ತಿದೆ. ಬೆಚ್ಚನೆಯ ಒಂದು ಮಡಿಲೊಳಗೆ ಬಚ್ಚಿಟ್ಟು ಬಿಕ್ಕಿ ಬಿಕ್ಕಿ ಅಳಬೇಕೆನಿಸುತ್ತಿದೆ. ಬೆಚ್ಚನೆಯ ಮಡಿಲು!?! ಇತ್ತಲ್ಲ ಅಂದೊಂದು, ಈಗೆಲ್ಲಿ ಹೋಯ್ತು? ಹುಂ,ಅದೇ ಅದರ ಕಳಕೊಳ್ಳುವಿಕೆಯೇ ಈ ದುಃಖಕ್ಕೆ ಕಾರಣ.

ಈ ಸಂಬಂಧಗಳು ಅದೆಷ್ಟು ಸೂಕ್ಷ್ಮ! ಸಣ್ಣ ರೇಷ್ಮೆ ಎಳೆಯಂತೆ. ಒಂದೊಂದು ಎಳೆಯೂ ಅಷ್ಟೇ ಪ್ರಮುಖವೆನಿಸುತ್ತದೆ. ಎಲ್ಲವು ಜೊತೆಸೇರಿ ಈ ಜೀವನದ ಹಂದರ ತಾನೆ? ಬಿಗಿಯಾದರೆ ಜೀವಕ್ಕೇ ಸಂಚಕಾರ ತಂದೀತು. ಸಡಿಲವಾಗಿ ಒಂದು ಎಳೆ ಕಡಿದು ಹೋದರೂ ಬಾಳೇ ನಶ್ವರವೇನೊ ಎಂಬ ಭಾವ. ಹೌದು, ನಶ್ವರವೆನಿಸಿದೆ ಈಗ! ಪ್ರತಿದಿನವೂ ಮಾತುಮಾತನ್ನೂ ಮನಸಾರೆ ಆಲಿಸಿ, ಕಿರುನಗೆಯೊಂದಿಗೆ ಪ್ರತಿಕ್ರಿಯಿಸುತ್ತಿದ್ದ ಆ ಸ್ಪಂದನೆಯೊಂದಿಲ್ಲದೆ. ಆ ಮಿಡಿಯುವ ಮನಸ್ಸು ಅದ್ಯಾವುದೋ ಆಸರೆಯ ಬೆನ್ನುಹತ್ತಿ ಹೋಗಿಬಿಟ್ಟಿದೆಯಲ್ಲ,ಬೆನ್ನಿಗೆ ಬಿದ್ದವರನ್ನು ಮರೆತು.

ಅಬ್ಬಾ,ಅದೆಂಥಾ ಹಿಂಸೆ. ಕಣ್ಣೆದುರೇ ಓಡಾಡುತ್ತಿದ್ದರೂ ಒಂದು ಚಂದದ ಮಾತಿಲ್ಲ. ಆ ಕೈಯ್ಯಲ್ಲಿರುವ ಜಂಗಮವಾಣಿಯೇ ಎಲ್ಲ. ಹೇಳಿಕೊಳ್ಳಬೇಕಿತ್ತು ನನ್ನೊಳಗಿನ ಭಾವನೆಗಳನ್ನು,ಕನಸುಗಳನ್ನು,ತುಡಿವ ಆಸೆಗಳನ್ನು. ಆದರೆ ಎಲ್ಲಿದೆ ಆ ಆತ್ಮೀಯತೆಯೀಗ?

ಓ ಒಲವೇ ಮರಳಿ ಬಾ. ನಿನಗಾಗಿ ಹಂಬಲಿಸಿ ಬಸವಳಿದು ಕಾದಿಹುದು ಈ ಮನಸ್ಸು. ಬಳಿಬಂದು ತಲೆಸವರಿ ಎರಡು....ಎರಡೇ ಎರಡು ಸವಿಮಾತಾಡು. ಉಕ್ಕಿ ಬರತ್ತಿರುವ ಈ ದುಃಖಕ್ಕೊಂದು ತಡೆಯೊಡ್ಡು ಬಾ.
ಬಂದೆಯಾ? ತುಂಬಿ ಬಂದಿರುವ ಈ ಕಂಗಳಿಗೆ ಏನೂ ಕಾಣುತ್ತಿಲ್ಲ, ಛೆ!

1 comment:

Prakash Payaniga said...

olawannu marali baa endu kareyuttiddeeri. enri adu odi hogitta? chennagide munduwarisi