Tuesday, December 9, 2008

ಕಾಯುವಿಕೆ. .

ಪುಟಾಣಿ ಹಕ್ಕಿ ಅಲ್ಲಿ 
ತನ್ನ ಗೂಡಲ್ಲಿ
ಕಾಯುತಿಹುದು ಅಮ್ಮನಿಗಾಗಿ..
ಹಸಿದ ಹೊಟ್ಟೆಯ ಆರ್ತನಾದ
ಅದರ ಕರೆಯಲ್ಲಿ...

ರೆಕ್ಕೆ ಬಲಿತ ಹಕ್ಕಿ ಕಾಯುತಿಹುದು
ಆಚೆ ಊರಾಚೆ ಎಲ್ಲೆಗಳ ದಾಟಿ
ಹಾರಿ ಹೋಗಲು...
ಅಮ್ಮನ ಬೆಚ್ಚನೆಯ ಗೂಡ ತೊರೆಯಲು...
ನಾಳಿನ ಸುಂದರ ಕನಸುಗಳು
ಅದರ ಕಣ್ಮಿಂಚಲ್ಲಿ...

ಹಾರಿಹೋದ ಹಕ್ಕಿ ಕಾಯುತಿಹುದು
ಹುಡುಕಾಡುತಿಹುದು ಸಂಗಾತಿಗಾಗಿ
ನೋವು ನಲಿವ ಹಂಚಿಕೊಳ್ಳಲು...
ಪ್ರೀತಿ ತುಂಬಿದೊಂದು ಮನದ
ಒಲವ ಪಡೆವ
ಬಯಕೆ ಹೃದಯದಲ್ಲಿ...

ಕಾಯುವಿಕೆ. .

ಬೇಸಿಗೆಯ ತಾಪಕ್ಕೆ ಬೆಂದ ಭೂಮಿ
ಕಾಯುವುದು ಮಳೆಗಾಗಿ, ಜಲಧಾರೆಗಾಗಿ.
ಮಳೆಯಬ್ಬರಕೆ ಬೆದರಿದ ಭೂಮಿ
ಕಾಯುವುದು ತಂಪಾದ ಇಬ್ಬನಿಗಾಗಿ.
ಚಳಿ ಹೆಚ್ಚಾಗಿ ನಡುಗುವ ಭೂಮಿ
ಕಾಯುವುದು ನಸುಬಿಸಿಲ ಝಳಕ್ಕಾಗಿ

ಮತ್ತದೇ 'ಕಾಯುವ' ಚಕ್ರ. . .
ನಮ್ಮೆಲ್ಲರ ಹೊತ್ತ ಭುವಿಯದ್ದೇ
ಈ ಕಥೆ. ತನ್ಮಧ್ಯೆ
ಯಾವ ಲೆಕ್ಕ ನಮ್ಮ ವ್ಯಥೆ??!

Sunday, November 9, 2008

ತಂಪಾಗಿ ಸದ್ದಿಲ್ಲದೆ ಬೀಸುತ್ತಿದ್ದ ತಂಗಾಳಿಗೆ ಮೈಯ್ಯೊಡ್ಡಿ ಕುಳಿತದ್ದೇ, ಪ್ರಕ್ಷುಬ್ಧ ಮನಸ್ಸಿನಲ್ಲಿ ಏನೇನೊ ವಿಲಕ್ಷಣ ಆಲೋಚನೆಗಳು ಸುಳಿಯತೊಡಗಿದವು. ನಿನ್ನೆಯಷ್ಟೇ ಸವಿ ಸವಿ ನೆನೆಪುಗಳನ್ನು ಮೆಲುಕು ಹಾಕಿ ತನ್ನಷ್ಟಕ್ಕೆ ತಾನೇ ನಗುತ್ತಿದ್ದ ಮನಸ್ಸು. ಇವತ್ತು ಅದೇನಾಯ್ತೊ ದುಃಖ ಉಮ್ಮಳಿಸಿ ಬರುತ್ತಿದೆ. ಬೆಚ್ಚನೆಯ ಒಂದು ಮಡಿಲೊಳಗೆ ಬಚ್ಚಿಟ್ಟು ಬಿಕ್ಕಿ ಬಿಕ್ಕಿ ಅಳಬೇಕೆನಿಸುತ್ತಿದೆ. ಬೆಚ್ಚನೆಯ ಮಡಿಲು!?! ಇತ್ತಲ್ಲ ಅಂದೊಂದು, ಈಗೆಲ್ಲಿ ಹೋಯ್ತು? ಹುಂ,ಅದೇ ಅದರ ಕಳಕೊಳ್ಳುವಿಕೆಯೇ ಈ ದುಃಖಕ್ಕೆ ಕಾರಣ.

ಈ ಸಂಬಂಧಗಳು ಅದೆಷ್ಟು ಸೂಕ್ಷ್ಮ! ಸಣ್ಣ ರೇಷ್ಮೆ ಎಳೆಯಂತೆ. ಒಂದೊಂದು ಎಳೆಯೂ ಅಷ್ಟೇ ಪ್ರಮುಖವೆನಿಸುತ್ತದೆ. ಎಲ್ಲವು ಜೊತೆಸೇರಿ ಈ ಜೀವನದ ಹಂದರ ತಾನೆ? ಬಿಗಿಯಾದರೆ ಜೀವಕ್ಕೇ ಸಂಚಕಾರ ತಂದೀತು. ಸಡಿಲವಾಗಿ ಒಂದು ಎಳೆ ಕಡಿದು ಹೋದರೂ ಬಾಳೇ ನಶ್ವರವೇನೊ ಎಂಬ ಭಾವ. ಹೌದು, ನಶ್ವರವೆನಿಸಿದೆ ಈಗ! ಪ್ರತಿದಿನವೂ ಮಾತುಮಾತನ್ನೂ ಮನಸಾರೆ ಆಲಿಸಿ, ಕಿರುನಗೆಯೊಂದಿಗೆ ಪ್ರತಿಕ್ರಿಯಿಸುತ್ತಿದ್ದ ಆ ಸ್ಪಂದನೆಯೊಂದಿಲ್ಲದೆ. ಆ ಮಿಡಿಯುವ ಮನಸ್ಸು ಅದ್ಯಾವುದೋ ಆಸರೆಯ ಬೆನ್ನುಹತ್ತಿ ಹೋಗಿಬಿಟ್ಟಿದೆಯಲ್ಲ,ಬೆನ್ನಿಗೆ ಬಿದ್ದವರನ್ನು ಮರೆತು.

ಅಬ್ಬಾ,ಅದೆಂಥಾ ಹಿಂಸೆ. ಕಣ್ಣೆದುರೇ ಓಡಾಡುತ್ತಿದ್ದರೂ ಒಂದು ಚಂದದ ಮಾತಿಲ್ಲ. ಆ ಕೈಯ್ಯಲ್ಲಿರುವ ಜಂಗಮವಾಣಿಯೇ ಎಲ್ಲ. ಹೇಳಿಕೊಳ್ಳಬೇಕಿತ್ತು ನನ್ನೊಳಗಿನ ಭಾವನೆಗಳನ್ನು,ಕನಸುಗಳನ್ನು,ತುಡಿವ ಆಸೆಗಳನ್ನು. ಆದರೆ ಎಲ್ಲಿದೆ ಆ ಆತ್ಮೀಯತೆಯೀಗ?

ಓ ಒಲವೇ ಮರಳಿ ಬಾ. ನಿನಗಾಗಿ ಹಂಬಲಿಸಿ ಬಸವಳಿದು ಕಾದಿಹುದು ಈ ಮನಸ್ಸು. ಬಳಿಬಂದು ತಲೆಸವರಿ ಎರಡು....ಎರಡೇ ಎರಡು ಸವಿಮಾತಾಡು. ಉಕ್ಕಿ ಬರತ್ತಿರುವ ಈ ದುಃಖಕ್ಕೊಂದು ತಡೆಯೊಡ್ಡು ಬಾ.
ಬಂದೆಯಾ? ತುಂಬಿ ಬಂದಿರುವ ಈ ಕಂಗಳಿಗೆ ಏನೂ ಕಾಣುತ್ತಿಲ್ಲ, ಛೆ!

ಮೊದಲ ಮಾತು

ನಮಸ್ಕಾರ. ನನ್ನ ಒಲವ ಬ್ಲಾಗಿಗೆ ಸ್ವಾಗತ. ನನ್ನ 'ಒಲವಿ' ಕನಸು ಇದು. ಆಗಾಗ ಬಂದು ಕಾಡುವ ಒಂಟಿತನವನ್ನುನೀಗಿಸಿಕೊಳ್ಳಲು ಬರಹದ ಮೊರೆಹೊಕ್ಕಿದ್ದೇನೆ. ಅದಕ್ಕೇ ೦ಟಿತನದಿ ಕಾಕಳೆವ ಮಾರ್ಗವು, ಒಲವು.

ಹೌದು, ಅದೊಂದು ನಮ್ಮ ಮನಸ್ಸಿನ ವಿಚಿತ್ರ ಸ್ಥಿತಿ ಎನ್ನಬಹುದೇನೊ. ಬಯಸಿದ್ದು ಸಿಗದಿದ್ದಾಗ, ಬಯಸದ್ದು ನಡೆದಾಗ, ಬಯಸಿದವರು ದೂರಾದಾಗ ಹೀಗೆ ನಮ್ಮ 'ಬಯಕೆ'ಗಳಿಗೆ ವಿರುದ್ಧವಾಗಿ ಏನಾದರೂ ಆದಾಗ ಅಲ್ಲಿ ಪ್ರತ್ಯಕ್ಷ, ಒಂಟಿತನ. "ನನಗ್ಯಾರೂ ಇಲ್ಲ. ನನ್ನವರು ಯಾರೂ ನನ್ನನ್ನು care ಮಾಡೋಲ್ಲ. ಯಾಕಾದ್ರೂ ಇದೆಯೋ ಬಾಳು. . ." ಇತ್ಯಾದಿತ್ಯಾದಿಆಲೋಚನೆಗಳ ಬಳ್ಳಿ ಮನವನ್ನು ಬಿಗಿಯಾಗಿ ಆವರಿಸಿಬಿಡುತ್ತದೆ. ಬಿಡಿಸಿಕೊಳ್ಳುವುದು ತುಸು ಕಷ್ಟವೇ. ಸಮಯದಲ್ಲೆಲ್ಲ ಕಾಗದ, ಪೆನ್ನು ಹಿಡಿದು ಕೂರುತ್ತೇನೆ. ಮನಸ್ಸಿಗೆ ಬಂದದ್ದು ಕಾಗದದ ಮೇಲೆ ಗೀಚಾಗಿರುತ್ತದೆ. ಸುಮ್ಮನೆ ತರಲೆಯೆನಿಸಿ, ಕಸದ ಬುಟ್ಟಿಯಹೊಟ್ಟೆತುಂಬಿಸಿದವು ಅವೆಷ್ಟೋ. ಕೆಲವು ಮಾತ್ರ ನನಗೇ ಆಶ್ಚರ್ಯವಾಗುವಂತೆ ಮೂಡಿಬಂದದ್ದೂ ಇದೆ. ನೀವೂ ಮಾಡಿ ನೋಡಿ. ಕಹಿಭಾವಗಳೆಲ್ಲ ಬಿಳಿಹಾಳೆಯ ಮೇಲೆ ಎಳೆ ಎಳೆಯಾಗಿ ಬಿಡಿಸಿಕೊಂಡು ಮನಸ್ಸು ಹಗುರಾಗಿರುತ್ತದೆ.

ಹೀಗೇ ಬರೆದವುಗಳನ್ನು ಹಾಗೇ ಬ್ಲಾಗಿನ ಪುಟಗಳಲ್ಲಿ ಅಚ್ಚುಹಾಕಲು ಹೊರಟಿದ್ದೇನೆ, ನನ್ನ 'ಒಲವಿ' ಸಾಂಗತ್ಯದೊಂದಿಗೆ.

ನನ್ನೊಲವಿನ ಸಲಹೆಯಂತೆ ಈ ಒಲವ ತೆರೆದೆ. ಆ ಒಲವಿಗೆ ಒಲವಿನ ಕಾಣಿಕೆಯಿದು. ಮನಸಿನೊಲುಮೆಗೆ ನಿಲುಕುವ ಭಾವಗಳ ಬರವಣಿಗೆಯಿದು. ಒಲುಮೆಯಿಂದ ಬರುತ್ತಾ ಇರಿ. ಈ ಒಲವ ಮರೆಯದಿರಿ.