Tuesday, December 9, 2008

ಕಾಯುವಿಕೆ. .

ಪುಟಾಣಿ ಹಕ್ಕಿ ಅಲ್ಲಿ 
ತನ್ನ ಗೂಡಲ್ಲಿ
ಕಾಯುತಿಹುದು ಅಮ್ಮನಿಗಾಗಿ..
ಹಸಿದ ಹೊಟ್ಟೆಯ ಆರ್ತನಾದ
ಅದರ ಕರೆಯಲ್ಲಿ...

ರೆಕ್ಕೆ ಬಲಿತ ಹಕ್ಕಿ ಕಾಯುತಿಹುದು
ಆಚೆ ಊರಾಚೆ ಎಲ್ಲೆಗಳ ದಾಟಿ
ಹಾರಿ ಹೋಗಲು...
ಅಮ್ಮನ ಬೆಚ್ಚನೆಯ ಗೂಡ ತೊರೆಯಲು...
ನಾಳಿನ ಸುಂದರ ಕನಸುಗಳು
ಅದರ ಕಣ್ಮಿಂಚಲ್ಲಿ...

ಹಾರಿಹೋದ ಹಕ್ಕಿ ಕಾಯುತಿಹುದು
ಹುಡುಕಾಡುತಿಹುದು ಸಂಗಾತಿಗಾಗಿ
ನೋವು ನಲಿವ ಹಂಚಿಕೊಳ್ಳಲು...
ಪ್ರೀತಿ ತುಂಬಿದೊಂದು ಮನದ
ಒಲವ ಪಡೆವ
ಬಯಕೆ ಹೃದಯದಲ್ಲಿ...

ಕಾಯುವಿಕೆ. .

ಬೇಸಿಗೆಯ ತಾಪಕ್ಕೆ ಬೆಂದ ಭೂಮಿ
ಕಾಯುವುದು ಮಳೆಗಾಗಿ, ಜಲಧಾರೆಗಾಗಿ.
ಮಳೆಯಬ್ಬರಕೆ ಬೆದರಿದ ಭೂಮಿ
ಕಾಯುವುದು ತಂಪಾದ ಇಬ್ಬನಿಗಾಗಿ.
ಚಳಿ ಹೆಚ್ಚಾಗಿ ನಡುಗುವ ಭೂಮಿ
ಕಾಯುವುದು ನಸುಬಿಸಿಲ ಝಳಕ್ಕಾಗಿ

ಮತ್ತದೇ 'ಕಾಯುವ' ಚಕ್ರ. . .
ನಮ್ಮೆಲ್ಲರ ಹೊತ್ತ ಭುವಿಯದ್ದೇ
ಈ ಕಥೆ. ತನ್ಮಧ್ಯೆ
ಯಾವ ಲೆಕ್ಕ ನಮ್ಮ ವ್ಯಥೆ??!